ಶಾಸ್ತ್ರೀ, ಬಿ ವಿ ಕೆ
1916-2003. ಕರ್ನಾಟಕದಲ್ಲಿ ಕಲೆಗಳಿಗೆ, ಮುಖ್ಯವಾಗಿ ಸಂಗೀತ, ನೃತ್ಯಕಲಾ ಚಟುವಟಿಕೆಗಳಿಗೆ ನವಚೈತನ್ಯ ನೀಡಿದವರು. ಕನ್ನಡ ನಾಡಿನ ಹಾಗೂ ದಕ್ಷಿಣದ ಕಲಾ ಪ್ರತಿಭೆಗಳನ್ನು ದೇಶಾದ್ಯಂತ ಪರಿಚಯಿಸಿ ಅವರಿಗೆ ಅರ್ಹ ಮನ್ನಣೆ ದೊರಕಿಸಿಕೊಟ್ಟವರು. ಆಪ್ತವರ್ಗದಲ್ಲಿ ಬಿ.ವಿ.ಕೆ., ಬಿ.ವಿ.ಕೆ ಶಾಸ್ತ್ರೀ ಎಂದೇ ಪರಿಚಿತರಾದ ಬಿ.ವಿ ಕೃಷ್ಣಶಾಸ್ತ್ರಿಗಳು ಪುಸ್ತಕಗಳಿಗೆ ಮೀಸಲಾಗಿದ್ದ ವಿಮರ್ಶಾವಲಯವನ್ನು ಲಲಿತಕಲಾ ಪ್ರಕಾರಕ್ಕೂ ವಿಸ್ತರಿಸಿ, ಆ ಪ್ರಕಾರದ ಬರವಣಿಗೆಗೆ ಹೊಸ ಆಯಾಮ ನೀಡಿದವರು. ಮುರಳಿ ಅವರ ಕಾವ್ಯನಾಮ, ಸಂಗೀತ, ನೃತ್ಯ, ಕಲಾ ವಲಯದಲ್ಲಿ ಭಾರತಾದ್ಯಂತ ಪರಿಚಿತವಾದ ಹೆಸರು. 

ಬಿ.ವಿ.ಕೆ. ಶಾಸ್ತ್ರಿಗಳು ಹುಟ್ಟಿದ್ದು ಮೈಸೂರಿಗೆ ಸಮೀಪದಲ್ಲಿರುವ ಪ್ರಮುಖ ಯಾತ್ರಾಸ್ಥಳವಾದ ನಂಜನಗೂಡಿನಲ್ಲಿ. ಜುಲೈ 30, 1916ರಲ್ಲಿ. ತಂದೆ ವೆಂಕಟಸುಬ್ಬಯ್ಯ, ತಾಯಿ ಸುಬ್ಬಮ್ಮ. ಸುಸಂಸ್ಕøತ ಸಂಪ್ರದಾಯಸ್ಥ ಕುಟುಂಬ. ತಂದೆ, ತಾಯಿ, ಚಿಕ್ಕಮ್ಮ ಸೋದರಿಯರೆಲ್ಲಾ ಹಾಡುಗಾರ್ತಿಯರು. ತಾಯಿ ಮಡಿಲಲ್ಲಿ ಇದ್ದಾಗಲೇ ಸಂಗೀತದ ಸಂಸ್ಕಾರ. ಬೆಳಕು ಹರಿಯುವ ಹೊತ್ತಿಗೆ ಕಿವಿಗೆ ಬೀಳುತ್ತಿದ್ದುದು ಉದಯರಾಗ. 

ಭಜನ ಗೋಷ್ಠಿಯಲ್ಲಿ ಹಾಡುತ್ತಿದ್ದನ್ನು ಕೇಳಿದ ಶಾಲಾ ಉಪಾಧ್ಯಾಯರಾದ ಸುಬ್ರಹ್ಮಣ್ಯ, ಶಾಸ್ತ್ರೀಯ ಸಂಗೀತ ಕಲಿಯಲು ಪ್ರೇರೇಪಿಸಿದರು; ಆಸ್ಥಾನ ವಿದ್ವಾನ್ ವಾಸುದೇವಾಚಾರ್ಯರಲ್ಲಿ ಕಲಿಯಬೇಕೆಂಬ ಆಸೆಯ ಬೀಜ ಬಿತ್ತಿದರು. 

ನಂಜನಗೂಡಿನಲ್ಲಿ ಪ್ರೌಢಶಾಲಾ ವ್ಯಾಸಂಗ ಮಾಡಿದ ಮೇಲೆ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಶಾಲೆಯಲ್ಲಿ ಕಲಾ ಶಿಕ್ಷಣ ವಿಭಾಗದಲ್ಲಿ ದಾಖಲಾದರು. ನಂಜನಗೂಡಿನಿಂದ ಮೈಸೂರಿಗೆ ಹೊರಟ ಉದ್ದೇಶ ವಾಸುದೇವಾಚಾರ್ಯರಲ್ಲಿ ಸಂಗೀತಾಭ್ಯಾಸ ಮಾಡುವುದು. ಆದರೆ ಆ ಆಸೆ ಈಡೇರಲಿಲ್ಲ. ಆಸ್ಥಾನ ವಿದ್ವಾನ್ ಚಿಕ್ಕರಾಮರಾಯರಲ್ಲಿ ಕ್ರಮಬದ್ದ ಪಾಠವಾಯಿತು. ಚಿಕ್ಕರಾಮರಾಯರು, ಬಿಡಾರಂ ಕೃಷ್ಣಪ್ಪ ಹಾಗೂ ವೀಣೆ ಸುಬ್ಬಣ್ಣನವರ ಶಿಷ್ಯರು. ಕರ್ನಾಟಕ ಸಂಗೀತವಲ್ಲದೆ ಉತ್ತರಾದಿ ಸಂಗೀತ ಪದ್ಧತಿಯ ಪರಿಚಯವೂ ಅವರಿಗೆ ಇತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲ; ಕಲೆ ಸಂಸ್ಕøತಿಯ ಸುವರ್ಣಯುಗ. ಆಗ ಮೈಸೂರು ಅರಸರ ರಾಜಧಾನಿಯೂ ಆಗಿತ್ತು. ಕಲೆ ಮತ್ತು ಸಂಸ್ಕøತಿ ಇಲ್ಲಿನ ಜನರ ಬದುಕಿನ ಅಂಗವಾಗಿತ್ತು. ಶಾಸ್ತ್ರಿಗಳು ಚಿಕ್ಕ ರಾಮರಾಯರಲ್ಲಿ ಸಂಗೀತವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದರು. ರಾಜಾಸ್ಥಾನಕ್ಕೆ ಬಂದ ಕಲಾವಿದರ ಕಛೇರಿಗಳಲ್ಲಿ ಕೇಳಿದರು. ಸ್ಥಳೀಯ ಹಾಗೂ ಹೊರನಾಡಿನಿಂದ ಬಂದ ಕಲಾವಿದರ ಪರಿಚಯ ಮಾಡಿಕೊಂಡರು. ತಮ್ಮ ಸಂಗೀತ ಜ್ಞಾನವನ್ನು ವಿಸ್ತರಿಸಿಕೊಂಡರು. ಚಾಮರಾಜೇಂದ್ರ ತಾಂತ್ರಿಕಶಾಲೆಯಲ್ಲಿ ಎನ್ ಜೆ ಪಾವಂಜೆ, ವೈ ಸುಬ್ರಹ್ಮಣ್ಯರಾಜು, ಎನ್ ಕೇಶವಯ್ಯ ಮೊದಲಾದ ಪ್ರಸಿದ್ಧ ಗುರುಗಳ ಮಾರ್ಗದರ್ಶನದಲ್ಲಿ ಕಲಾಭ್ಯಾಸ ನಡೆಸಿ 1938ರಲ್ಲಿ ಡಿಪ್ಲೊಮಾ ಪಡೆದರು. ಇವರು ರಚಿಸಿದ ವರ್ಣಚಿತ್ರವೊಂದಕ್ಕೆ ಮದರಾಸಿನಲ್ಲಿ 1943ರಲ್ಲಿ ನಡೆದ ಕಾಂಗ್ರೆಸ್ ವಸ್ತುಪ್ರದರ್ಶನದಲ್ಲಿ ಬಹುಮಾನ ಪಡೆಯಿತು. ಮುಂಬೈ ಜೆ ಜೆ ಕಲಾಶಾಲೆಗೆ ಸೇರುವ ಆಸೆ. ಆದರೆ ಮೈಸೂರು ಸರಕಾರ ಕೊಡುತ್ತಿದ್ದ ವಿದ್ಯಾರ್ಥಿವೇತನವನ್ನು ಆ ವರ್ಷ ತಡೆಹಿಡಿಯಲಾಗಿತ್ತು. ಕಲೆಯನ್ನೇ ನೆಚ್ಚಿ ಬಾಳು ಸಾಗಿಸುವ ಹಾಗಿರಲಿಲ್ಲ. ಕೆಲಸದ ಬೇಟೆಯಲ್ಲಿರುವಾಗಲೇ `ಸಾಧ್ವಿ ವಾರಪತ್ರಿಕೆಯಲ್ಲಿ ಅಂಕಣ ಬರೆಯಲು ಅವಕಾಶ ಪ್ರಾಪ್ತಿ. `ಶುಕ್ರಾಚಾರ್ಯ ಬರೆದ `ವಕ್ರದೃಷ್ಟಿ ಜನಪ್ರಿಯ. ಮಿತ್ರರ ನೆರವಿನಿಂದ ಮೈಸೂರು ವಿಶ್ವವಿದ್ಯಾಲಯದ ಸ್ಕೌಟ್ ವಿಭಾಗದಲ್ಲಿ ಅರೆಕಾಲಿಕ ಹುದ್ದೆ. ಶಾಸ್ತ್ರಿಗಳಿಗೆ ಹೊಸ ಜಗತ್ತಿಗೆ ಪ್ರವೇಶ ನೀಡಿದ ಹುದ್ದೆ. ಶಾಸ್ತ್ರಿಗಳಿಗೆ ವಿಶ್ವವಿದ್ಯಾನಿಲಯದ ಕೆಲಸ ಅರೆಕಾಲಿಕವಾದರೂ, ವಿಶ್ವವಿದ್ಯಾನಿಲಯದ ಪುಸ್ತಕ ಭಂಡಾರದಲ್ಲಿ ಪೂರ್ಣಕಾಲಿಕ ಹುದ್ದೆ. ಕಲೆ, ಸಾಹಿತ್ಯ, ಸಂಗೀತ ಮೊದಲಾದ ವಿಷಯಗಳಲ್ಲಿ ಆಸಕ್ತಿ. ಈ ವಿಷಯಗಳ ಕುರಿತು ತಲಸ್ಪರ್ಶಿಯಾದ ಅಧ್ಯಯನ ನಡೆಸಿದರು. `ನಡೆದಾಡುವ ವಿಶ್ವಕೋಶ ಎಂಬ ಮೆಚ್ಚುಗೆಗೆ ಪಾತ್ರರಾದರು. ಎ ಆರ್ ಕೃಷ್ಣಶಾಸ್ತ್ರಿಗಳ ಪ್ರೋತ್ಸಾಹದಿಂದ ಬರೆದ ಲೇಖನ `ಸಾಂಪ್ರದಾಯಿಕ ಚಿತ್ರಕಲೆ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಯಿತು; ಮೆಚ್ಚುಗೆ ಪಡೆಯಿತು. 

1940ರಲ್ಲಿ ಪಿತೃ ವಿಯೋಗ. ಕುಟುಂಬ ನಿರ್ವಹಣೆಯ ಹೊಣೆಗಾರಿಕೆ ಹೊತ್ತ ಶಾಸ್ತ್ರಿಗಳಿಗೆ 1943ರಲ್ಲಿ ಹುಜೂರ್ ಟ್ರೆಜರಿಯಲ್ಲಿ ಖಾಯಂ ಉದ್ಯೋಗ ದೊರೆತು ಸ್ವಲ್ಪ ಮಟ್ಟಿಗೆ ನೆಮ್ಮದಿ. ಜವಾಬ್ದಾರಿ ಸರಕಾರದ ಚಳವಳಿ, ಅದನ್ನು ಅನುಸರಿಸಿಯೇ ಆರಂಭವಾದ ಕ್ವಿಟ್ ಇಂಡಿಯ ಚಳವಳಿಯಲ್ಲಿ ಸಾಧ್ವಿ ವಾರಪತ್ರಿಕೆಯ ಸಂಪಾದಕ ಅಗರಂ ರಂಗಯ್ಯನವರ ಬಂಧನ. ಪತ್ರಿಕೆ ನಡೆಸಲು ರಂಗಯ್ಯನವರ ಸೋದರರಿಗೆ ನೆರವಾಗಲು ಶಾಸ್ತ್ರಿಗಳು ತಮ್ಮ ವಾಸಸ್ಥಳವನ್ನು ಸಾಧ್ವಿ ಕಾರ್ಯಾಲಯದ ಕಟ್ಟಡಕ್ಕೆ ವರ್ಗಾಯಿಸಿದರು. ಸಾಧ್ವಿ ಆಗ ದಿನಪತ್ರಿಕೆಯಾಗಿತ್ತು. ಚಳವಳಿಗೆ ನೆರವಾಗಲು ಭೂಗತ ಪತ್ರಿಕೆಯೊಂದನ್ನು ಶಾಸ್ತ್ರಿಗಳು ಪ್ರಕಟಿಸಿದರು. ಶಾಸ್ತ್ರಿಗಳ ಕೊಠಡಿ ಕೆಲಕಾಲ ಕೈಲಾಸಂ ರವರ `ನೂಕ್ ಆಗಿತ್ತು. ಕೈಲಾಸಂ ರವರ ಕೃತಿರಚನೆ, ರಂಗತಾಲೀಮು ಮತ್ತಿತರ ಚಟುವಟಿಕೆಗಳ ತಾಣವಾಯಿತು. ಕೈಲಾಸಂರವರ ಜೊತೆ ಸೇರಿ, ಒಂದು ಪ್ರದರ್ಶನವನ್ನೂ ನಡೆಸಿದ ಅನುಭವ.
ಬಾಲ್ಯ ಸ್ನೇಹಿತರ ಮತ್ತು ಪ್ರಜಾವಾಣಿ ಗೆಳೆಯರ ಒತ್ತಾಯದ ಮೇಲೆ ಶಾಸ್ತ್ರಿಗಳಿಂದ ಸಂಗೀತ ಕಲೆಗಳ ಬಗೆಗೆ ವಿಮರ್ಶೆ ಲೇಖನಗಳು(1953) ಹರಿದು ಬಂದವು. `ಮುರಳಿಯ ಬರಹಗಳಿಂದ, ಕಲಾಲೋಕದಲ್ಲಿ ನವಸಂಚಲನ. ಕರ್ನಾಟಕದ ಕಲಾವಿದರ ಬಗೆಗೆ ಬರೆಯಲು ಇಲಸ್ಟ್ರೇಟೆಡ್ ವೀಕ್ಲಿ ಸಂಪಾದಕ ಎ ಎಸ್ ರಾಮನ್ ಅವರಿಂದಲೂ ಆಮಂತ್ರಣ. ಕರ್ಣಾಟಕದ ಕಲಾಪ್ರತಿಭೆಗಳ ಜೊತೆಗೆ ಭಾರತದ ಕಲಾಲೋಕದಲ್ಲಿ `ಮುರಳಿ, ಬಿ ವಿ ಕೆ ಶಾಸ್ತ್ರಿಗಳ ಅನಾವರಣ.
ಅಧ್ಯಯನಶೀಲರಾದ ಶಾಸ್ತ್ರಿಗಳ ಆಸಕ್ತಿ ಕೇವಲ ಶಾಸ್ತ್ರೀಯ ಸಂಗೀತಕ್ಕೆ ಮೀಸಲಾಗಿರಲಿಲ್ಲ. ಕರ್ಣಾಟಕ, ಹಿಂದೂಸ್ಥಾನಿ, ಜಾನಪದ, ಸುಗಮ ಸಂಗೀತ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ, ಜಾಜ್. ಹೀಗೆ ಸಂಗೀತ ಎಲ್ಲ ಪ್ರಬೇಧಗಳಲ್ಲೂ ಅವರದು ವಿಸ್ತಾರವಾದ ಜ್ಞಾನ, ಖಚಿತವಾದ ಜ್ಞಾನ; ಶಿಲ್ಪ, ಚಿತ್ರಕಲೆ, ಸಾಹಿತ್ಯ ಈ ಎಲ್ಲ ಪ್ರಕಾರಗಳಲ್ಲೂ ಅಧಿಕಾರ ವಾಣಿಯಿಂದ ಮಾತಾಡಬಲ್ಲವರಾಗಿದ್ದರು. ಈ ಕಲಾಪ್ರಕಾರಗಳಲ್ಲಿ ಯಾವುದೇ ಹೊಸ ಬೆಳವಣಿಗೆಗಳು ಅವರ ಅರಿವಿಗೆ ಬಾರದೆ ಹೋಗುತ್ತಿರಲಿಲ್ಲ. ಸ್ಮರಣ ಶಕ್ತಿ ಅದ್ಭುತ; ನಡೆದಾಡುವ ವಿಶ್ವಕೋಶವೆನಿಸಿದ ಶಾಸ್ತ್ರಿಗಳು `ಕಲೆಗಳ ಜೊತೆಗೆ, ಕಲೆಗಾರರನ್ನು ಬಲ್ಲವರು. ಕಲೆಗಾರನ ಮನೋಧರ್ಮವನ್ನು ಬಲ್ಲವರು. ಕಲೆಗಾರ ಸಾಧನೆ ಯೋಗ್ಯತೆಗಳ ಬಗೆಗೆ ಅಧಿಕಾರ ವಾಣಿಯಿಂದ ಮಾತ್ರವಲ್ಲ ವಿಶಾಲ ಹೃದಯದಿಂದ ಬರೆಯುವುದು ಅವರ ವೈಶಿಷ್ಟ್ಯ ಎಂಬ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಅವರ ಬರವಣಿಗೆ ಸರಳ, ವಿಮರ್ಶೆಯಲ್ಲಿ ಅವರು ಸಮದರ್ಶಿ; ಮಾರ್ಗದರ್ಶಿ.
ಶಾಸ್ತ್ರಿಗಳ ಚಟುವಟಿಕೆ, ಲೇಖನ ವಿಮರ್ಶೆಗಳಿಗೆ ಸೀಮಿತವಾಗಿರಲಿಲ್ಲ. ರಾಜಾಶ್ರಯ ತಪ್ಪಿದ ಮೇಲೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ, ಅಂತರ್ಮುಖಿಗಳಾಗಿ ಪರಿತಪಿಸುತ್ತಿದ್ದ ಕಲಾವಿದರಲ್ಲಿ ನವಚೈತನ್ಯ ತುಂಬುವುದು ಅತ್ಯಗತ್ಯವೆನಿಸಿತು. ಕರ್ನಾಟಕಕ್ಕೆ ಹೊರನಾಡಿನಿಂದ ಬರುವ ಪ್ರಮುಖ ಕಲಾವಿದರನ್ನು ಸ್ಥಳೀಯ ಕಲಾವಿದರಿಗೆ ಪರಿಚಯಿಸಿ, ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟರು. ಖ್ಯಾತ ಸರೋದ್ ವಾದಕ ಅಲಿ ಅಕ್ಬರ್ ಮತ್ತು ಅಲ್ಲಾರಖಾ ಬೆಂಗಳೂರಿಗೆ (1961) ಬಂದಿದ್ದಾಗ, ದೊರೆಸ್ವಾಮಿ ಐಯ್ಯಂಗಾರ್ ಅವರ ವೀಣಾವಾದನ ಕೇಳಬಯಸಿದರು. ಶಾಸ್ತ್ರಿಗಳ ಕಾರ್ಯಕ್ಷಮತೆಯಿಂದ ಅದು ವೀಣಾ - ಸರೋದ್ ಜುಗಲ್‍ಬಂದಿ ಕಾರ್ಯಕ್ರಮದಲ್ಲಿ ಪರ್ಯವಸಾನವಾಯಿತು. ನಾಲ್ಕು ಗಂಟೆ ಕಾಲದ ಈ ಅದ್ಭುತ ಕಾರ್ಯಕ್ರಮ ಭಾಗವಹಿಸಿದ ಕಲಾವಿದರಿಗೆ ಮಾತ್ರವಲ್ಲ ಶ್ರೋತೃಗಳಿಗೂ ಒಂದು ಅದ್ಭುತವಾದ ಅನುಭವ.

ಸಂಗೀತ ಕಲಾವಿದರಿಂದ ಸಂಗೀತ ಕಲಾವಿದರಿಗಾಗಿ 1969ರ ಅಸ್ತಿತ್ವಕ್ಕೆ ಬಂದ ಕರ್ನಾಟಕ ಗಾನ ಕಲಾಪರಿಷತ್ತಿಗೆ ಮಾರ್ಗದರ್ಶಕರಾಗಿ ನಿಂತ ಶಾಸ್ತ್ರಿಗಳು ಅದರ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿದರು. ಅವರು ಆಯೋಜಿಸಿದ ವಾರ್ಷಿಕ ವಿಚಾರಗೋಷ್ಠಿಗಳು ಅರ್ಥಪೂರ್ಣವಾಗಿದ್ದವು. ಕೇಂದ್ರ ಅಕಾಡೆಮಿಯ ಸದಸ್ಯರಾಗಿದ್ದ ಶಾಸ್ತ್ರಿಗಳ ಪ್ರಭಾವದಿಂದ, ಹೊರ ರಾಜ್ಯಗಳ ಪರಿಣಿತರೂ ಈ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವಂತಾಗಿತ್ತು. `ವಿಜ್ಞಾನ ಮತ್ತು ಸಂಗೀತ, `ದೇವಾಲಯ ಸಂಗೀತ ಪದ್ಧತಿ, `ಹರಿದಾಸ ಪರಂಪರೆ, `ಅಭಿನಯ ಮೊದಲಾದ ವಿದ್ವತ್ಪೂರ್ಣ ವಿಚಾರಗೋಷ್ಠಿಗಳು ಪರಿಷತ್ತಿನ ಪ್ರತಿಷ್ಠೆಯನ್ನು ಹೆಚ್ಚಿಸಿದವು. ಪರಿಷತ್ತಿನ ವಿವಿಧ ಗೋಷ್ಠಿಗಳಲ್ಲಿ ಮಂಡಿಸಲಾದ 700 ಪ್ರಬಂಧಗಳಲ್ಲಿ 140 ಪ್ರಬಂಧಗಳನ್ನು `ಗಾನಮಂಜರಿ ಹೆಸರಿನಲ್ಲಿ ಕನ್ನಡ ಸಂಸ್ಕøತಿ ಇಲಾಖೆ ನೆರವಿನಿಂದ ಪ್ರಕಟಿಸಲಾಗಿದೆ. ಈ ಎರಡೂ ಸಂಪುಟಗಳ ಸಂಪಾದಕರು ಬಿ ವಿ ಕೆ ಶಾಸ್ತ್ರಿಗಳು. 

ಶಾಸ್ತ್ರಿಗಳು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಬೆಂಗಳೂರು ಕೇಂದ್ರದ ನಿರ್ದೇಶಕರಾಗಿದ್ದಾಗ ದೆಹಲಿಯಲ್ಲಿದ್ದ ನಾಟ್ಯ ಇನ್‍ಸ್ಟಿಟ್ಯೂಟ್ ಆಫ್ ಕೊರಿಯೊಗ್ರಾಫಿ ನಿರ್ದೇಶಕರಾದ ಮಾಯಾರಾವ್ ನೇತೃತ್ವದಲ್ಲಿ ನೃತ್ಯ ಸಂಯೋಜನೆ ಕುರಿತಂತೆ ಕಾರ್ಯಾಗಾರ ನಡೆಸಿದರು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರು ಸೋಲೋ ನೃತ್ಯಾಭಿನಯ ನೀಡುತ್ತಿದ್ದ ಕಲಾವಿದರು. ನೃತ್ಯಕಾರ್ಯಕ್ರಮಗಳ ಬಗೆಗೆ ಅವರ ದೃಷ್ಟಿಕೋನವೇ ಬದಲಾಯಿತು. ಕಾರ್ಯಾಗಾರದ ಸಮಾರೋಪವಾಗಿ ಕರ್ನಾಟಕ ಇತಿಹಾಸ ಆಧರಿಸಿ ರೂಪಿಸಲಾದ `ರಾಜ ತರಂಗ - ನೃತ್ಯಮಂಜರಿ ಒಂದು ಅಪೂರ್ವ ಕಾರ್ಯಕ್ರಮವಾಯಿತು. ಸೋಲೋ ನರ್ತಕರ ಮುಂದಿನ ಕಾರ್ಯಕ್ರಮಗಳು ವಿಸ್ತøತಗೊಂಡವು. ಸಂಗೀತದ ಬಗೆಗೆ ಎಂ ಎಲ್ ವಸಂತಕುಮಾರಿಯವರು ನಡೆಸಿಕೊಟ್ಟ ಕಾರ್ಯಾಗಾರ, ಕಲಾನಿಧಿ ನಾರಾಯಣ್ ಅವರಿಂದ `ಅಭಿನಯದ ಬಗೆಗೆ ಕಾರ್ಯಾಗಾರ ಶಾಸ್ತ್ರಿಯವರ ಆಸಕ್ತಿಯಿಂದ ಏರ್ಪಟ್ಟವು.

ತಮ್ಮದು ಮೈಸೂರು ಸಂಪ್ರದಾಯದ ನೃತ್ಯ ಪದ್ಧತಿಯೆಂದು ಹೇಳಿಕೊಳ್ಳುತ್ತಿದ್ದ ಕಲಾವಿದೆಯರು ತಮ್ಮ ಪ್ರದರ್ಶನದಲ್ಲಿ ಅಳವಡಿಸಿಕೊಳ್ಳುತ್ತಿದ್ದದ್ದು ತಮಿಳು. ತೆಲುಗು ವಾಗ್ಗೇಯಕಾರರ ಕೃತಿಗಳನ್ನು. ಮೈಸೂರು ಸಂಪ್ರದಾಯದ ನೃತ್ಯವೆಂದ ಮೇಲೆ ಕನ್ನಡ ಕೃತಿಗಳನ್ನೇ ಆರಿಸಿಕೊಳ್ಳಲು ಶಾಸ್ತ್ರಿಗಳು ಸಲಹೆ ನೀಡಿದರು. `ಸುಳಾದಿ ಪ್ರಬಂಧಗಳು ಚಿಕ್ಕದೇವರಾಜ ಒಡೆಯರ `ಶೃಂಗಾರ ಸಪ್ತಪದಿ. ಡಿವಿಜಿಯವರ `ಅಂತಃಪುರ ಗೀತೆಗಳು ಇವುಗಳನ್ನು ಅಭಿನಯಿಸಲು ಪ್ರೋತ್ಸಾಹಿಸಿದರು. ಅಲ್ಲಿಂದ ನೃತ್ಯ ಕಲಾವಿದರು ತಮ್ಮ ಕಾರ್ಯಕ್ರಮಗಳಲ್ಲಿ ಕನ್ನಡ ರಚನೆಗಳಿಗೆ ಆದ್ಯತೆ ನೀಡಿದರು. ಶಾಸ್ತ್ರಿಗಳ ಕನ್ನಡ ಸಾಹಿತ್ಯದ ಸಿರಿ ಸಂಪತ್ತನ್ನು ಮದರಾಸಿನ ಸಂಗೀತ ಸಮ್ಮೇಳನದಲ್ಲಿ ಅನಾವರಣಗೊಳಿಸಿದರು. ಈ ಕಾರ್ಯಕ್ಕೆ ಅವರು ಕರ್ನಾಟಕದ ಉದಯೋನ್ಮುಖ ಕಲಾವಿದರನ್ನು ಆರಿಸಿಕೊಂಡರು. ನೃತ್ಯಸಂಸ್ಥೆಗಳು ವಾರ್ಷಿಕೋತ್ಸವಗಳನ್ನು ಒಂದು ಶಾಲಾಕಾರ್ಯಕ್ರಮದಂತೆ ನಡೆಸದೆ ಅದಕ್ಕೆ ರಾಷ್ಟ್ರೀಯ ಸ್ವರೂಪದ ಕಲಾಮಹೋತ್ಸವದಂತೆ ಆಯೋಜಿಸಲು ನೂಪುರ ಮೊದಲಾದ ಸಂಸ್ಥೆಗಳಿಗೆ ನೀಡಿದ ಮಾರ್ಗದರ್ಶನ. `ನಿತ್ಯ ನೃತ್ಯ ಕಾರ್ಯಕ್ರಮ ರಾಷ್ಟ್ರಾದ್ಯಂತ ಪ್ರಸಿದ್ಧ.

1982ರಲ್ಲಿ ಬೆಂಗಳೂರಿನ ಗಾಯನ ಸಮಾಜದ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿ ಶಾಸ್ತ್ರಿಗಳು ಆಯ್ಕೆಯಾದರು. ಸಂಗೀತಗಾರರಲ್ಲದವರೊಬ್ಬರನ್ನು ಅಧ್ಯಕ್ಷತೆಗೆ ಆರಿಸಿದ್ದು, ಶಾಸ್ತ್ರಿಗಳ ಸಂಗೀತಶಾಸ್ತ್ರದ ಪರಿಣತಿಗೆ ಸಂದ ಗೌರವ. ಶಾಸ್ತ್ರಿಗಳು ಆ ಸಮ್ಮೇಳನದ ಕಾರ್ಯಕಲಾಪಕ್ಕೆ ವಿಶಿಷ್ಟರೂಪ ಕೊಟ್ಟರು. ಸಮ್ಮೇಳನದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದರಿಗೆ ಸಮನಾದ ಅವಕಾಶ ನೀಡಿದರು. ಯುವ ಪ್ರತಿಭೆಗಳಲ್ಲಿ ಅವರಿಗಿದ್ದ ಭರವಸೆ ಅಪಾರ. ಬಹುಮಂದಿ ಯುವ ಕಲಾವಿದರಿಗೆ ಶಾಸ್ತ್ರಿಗಳು ಮಾರ್ಗದರ್ಶಿ; ಮಾನಸಿಕ ಗುರು.
ಪತ್ರಿಕೆಗಳಿಗೆ ಸಂಶೋಧನಾತ್ಮಕ ಕಲಾಸಂಸ್ಥೆಗಳ ಪ್ರಕಟಣೆಗಳಿಗೆ ಅವರು ಬರೆದ ಅಸಂಖ್ಯ ಲೇಖನಗಳಲ್ಲಿ 127 ಮಾತ್ರ ಬೆಂಗಳೂರು ಗಾಯನ ಸಮಾಜ ಪ್ರಕಟಿಸಿದ `ಮುರಳಿವಾಣಿ ಸಂಭಾವನಾ ಗ್ರಂಥದಲ್ಲಿ ಪ್ರಕಟವಾಗಿವೆ (1999).

ದೆಹಲಿಯ ಸಂಗೀತ ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿ, ದಕ್ಷಿಣಭಾರತ ಸಾಂಸ್ಕøತಿಕ ಕೇಂದ್ರ, ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ, ಐಸಿಸಿಆರ್ ಮೊದಲಾದ ಸಾಂಸ್ಕøತಿಕ ಸಂಸ್ಥೆಗಳಲ್ಲಿ ಸಲಹೆಗಾರ ಕಾರ್ಯನಿರ್ವಾಹಕರಾಗಿ ದುಡಿದಿದ್ದಾರೆ. ಮದರಾಸಿನ ಕಲಾಕ್ಷೇತ್ರದ ಆಡಳಿತ ಮಂಡಲಿಯಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಸಾಂಸ್ಕøತಿಕ ಉತ್ಸವ ಸಮಿತಿಗಳ ಸದಸ್ಯರು, ಮಾರ್ಗದರ್ಶಕರಾಗಿದ್ದರು. ಬೆಂಗಳೂರಿನಲ್ಲಿ ನಡೆದ (1986) ಸಾರ್ಕ್ ಸಮ್ಮೇಳನ ಕಾಲದಲ್ಲಿ ನಡೆದ ದಕ್ಷಿಣ ಸಾಂಸ್ಕøತಿಕ ಉತ್ಸವದಲ್ಲಿ ಸಂಗೀತ ನೃತ್ಯ ಕಾರ್ಯಕ್ರಮಗಳ ಸಂಘಟಕರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಕೇವಲ ಎರಡು ವಾರಗಳ ಅವಧಿಯಲ್ಲಿ ರಾಷ್ಟ್ರದ ಪ್ರಮುಖ ಕಲಾವಿದರನ್ನು ಒಂದು ಕಡೆ ಸೇರಿಸಿ ಏರ್ಪಡಿಸಿದ 140 ಕಾರ್ಯಕ್ರಮಗಳು ಶಾಸ್ತ್ರಿಗಳ ಸಂಘಟನಾ ಕೌಶಲ್ಯಕ್ಕೆ ಉತ್ತಮ ನಿದರ್ಶನ.

ಬಿ ವಿ ಕೆ ಶಾಸ್ತ್ರಿಗಳ ಗ್ರಂಥರಚನೆ ಮಿತವಾದರೂ ಮಹತ್ವಪೂರ್ಣವಾದವು. ಡಾ. ಎಸ್ ಆರ್ ರಾವ್ ಅವರ ಜೊತೆಗೂಡಿ ಬರೆದ `ಟ್ರೆಡಿಷನಲ್ ಪೆಯಿಂಟಿಂಗ್ಸ್ ಆಫ್ ಕರ್ನಾಟಕ ಒಂದು ಮಹತ್ವಪೂರ್ಣ ಸಚಿತ್ರ ಗ್ರಂಥ, ಅದೇ ಗ್ರಂಥದ ಸಂಕ್ಷಿಪ್ತರೂಪವನ್ನು ಶಾಸ್ತ್ರಿಗಳು ಸಂಪಾದಿಸಿದ್ದಾರೆ. ಬಡೇ ಗುಲಾಂ ಆಲಿಖಾನ್, ಟಿ ಚೌಡಯ್ಯ, ಬೆಂಗಳೂರು ನಾಗರತ್ನಮ್ಮ, ಕನ್ನಡ ಸಾಹಿತ್ಯದಲ್ಲಿ ತಾಳವಾದ್ಯ, ಕಲೆಯ ಗೊಂಚಲು ಇವು ಮುಖ್ಯವಾದ ಪ್ರಕಟಣೆಗಳು.

ಆಕಾಶವಾಣಿ ವಾರ್ಷಿಕ ಪ್ರಶಸ್ತಿ (1976), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1985), ಲಲಿತಕಲಾ ಅಕಾಡೆಮಿ ಪ್ರಶಸ್ತಿ(1986), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ(1988), ಮದರಾಸ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ(1985), ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರದೇಶ ವಿಮರ್ಶಕ ಪ್ರಶಸ್ತಿ(1992) ಮತ್ತು ಬೆಂಗಳೂರು ಗಾಯನ ಸಮಾಜದ `ಸಂಗೀತ ಕಲಾ ರತ್ನ ಪ್ರಶಸ್ತಿ(1982) ಇವು ಕೆಲವು ಶಾಸ್ತ್ರಿಗಳಿಗೆ ಲಭ್ಯವಾದ ಪುರಸ್ಕಾರಗಳಲ್ಲಿ ಮುಖ್ಯವಾದವು.

ಸಂಗೀತ, ಕಲೆ ಅವರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿದ್ದ ಶಾಸ್ತ್ರಿಗಳು ಸೆಪ್ಟೆಂಬರ್ 22, 2003ರಲ್ಲಿ ವಿಧಿವಶರಾದರು.
-ಎಂ.ಬಿ.ಎಸ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ